DARK MODE 

ಗುರುವಾರ, ಮೇ 16, 2019

ಕನ್ನಡಿಗರೇ...ಜೂನ್ ತಿಂಗಳಲ್ಲಿ ತಾಪಮಾನ ಏರಿಕೆ..!

     ಮೇ ತಿಂಗಳ ಬಿಸಿಲಲ್ಲಿ ಕೇರಳ ಸೇರಿದಂತೆ ಎಲ್ಲಾ ಪ್ರದೇಶಗಳು ತೀವ್ರ ಬಿಸಿಲಿನಿಂದ ಮತ್ತು ಶುದ್ಧ ಜಲದ ಕ್ಷಾಮದಿಂದ ಕಂಗೆಡುತ್ತಿದೆ. ಕೇರಳದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ನಮ್ಮ ಕಾಸರಗೋಡಿನ ಹವಾಮಾನ ಸ್ವಲ್ಪ ಮಟ್ಟಿಗಾದರೂ ತೃಪ್ತಿಕರವೆನಿಸುತ್ತದೆ. ಆದರೂ ದಿನದಿಂದ ದಿನಕ್ಕೆ ನಮ್ಮ ಪ್ರದೇಶಗಳಲ್ಲೂ ಉಷ್ಣತೆ, ಶುದ್ಧ ನೀರಿನ ಕ್ಷಾಮ ಹೆಚ್ಚುತ್ತಾ ಇದೆ. ಆದರೆ ಕಾಸರಗೋಡಿನ ಕನ್ನಡಿಗರಿಗೆ ಇದೆಲ್ಲ ಸಮಸ್ಯೆಯೇ ಅಲ್ಲ. ಯಾಕೆಂದರೆ ಹವಾಮಾನ ಮುನ್ಸೂಚನೆಯಂತೆ ಜೂನ್ ಮೊದಲ ವಾರದ ಅಂತ್ಯದೊಂದಿಗೆ ಮಳೆ ಬಂದೇ ಬರುತ್ತದೆ. ಜೂನ್ ತಿಂಗಳ ಆಗಮನದೊಂದಿಗೆ ಬಿಸಿಲು ಕಡಿಮೆಯಾಗುತ್ತದೆ. ಆದರೆ ಬಿಸಿಲಿನ ಬಿಸಿಯನ್ನೂ ಮೀರಿಸುವ ಬಿಸಿಯೊಂದು ಕನ್ನಡಿಗರಿಗೆ ತಟ್ಟುತ್ತದೆ. ಅದು ಬೇರೆಯೇನೂ ಅಲ್ಲ.... ಬೇಸಿಗೆ ರಜೆ ಕಳೆದು ಶಾಲೆಗಳು ತೆರೆಯಲು ಗಂಟೆಗಳ ಅಂತರ ಮಾತ್ರ ಬಾಕಿ....

     ಈ ಬಾರಿ ನಮ್ಮ ಕನ್ನಡ ಮಕ್ಕಳ ಭವಿಷ್ಯ ಹೇಗಿರುತ್ತದೋ..... ಕನ್ನಡ ಶಾಲೆಗಳ ಭವಿಷ್ಯವೇನು..... ಎಂಬ ಯಕ್ಷಪ್ರಶ್ನೆಗಳ ಸಾಲು. ಕಳೆದ ಅಧ್ಯಯನ ವರ್ಷದ ಅಂತ್ಯದೊಂದಿಗೆ ಕನ್ನಡ ಮಾಧ್ಯಮದ ಮಕ್ಕಳಿಗೆ ಪಾಠ ಮಾಡಲು ಕೇರಳ ಲೋಕಸೇವಾ ಆಯೋಗದ ಮೂಲಕ ಕನ್ನಡ ಬಾರದ ಅಧ್ಯಾಪಕರ ನೇಮಕಾತಿ ನಡೆಯಿತು. ಆದರೆ ಕನ್ನಡ ವಿದ್ಯಾರ್ಥಿಗಳ ಮತ್ತು ಕನ್ನಡ ಪರ ಸಂಘಟನೆಗಳ ತೀವ್ರ ಪ್ರತಿಭಟನೆಯಿಂದ ಸರಕಾರವು ಮಲೆಯಾಳ ಬಾರದ ಅಧ್ಯಾಪಕರನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿತು. ಆದರೆ ಇನ್ನೂ ಕನ್ನಡ ಬಾರದ ಅಧ್ಯಾಪಕರ ಆಗಮನವನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ.

     ಕೇರಳ ಸರಕಾರದ ಆಜ್ಞೆಯಂತೆ ರಚಿತವಾಗಿರುವ ಡಾ.ಎಂ.ಎ ಖಾದರ್ ಅಧ್ಯಕ್ಷರಾಗಿರುವ ತ್ರಿಸದಸ್ಯ ಆಯೋಗದ ಶಿಫಾರಸಿನಂತೆ ಕೇರಳ ಸರಕಾರವು ಒಂಭತ್ತರಿಂದ ಹನ್ನೆರಡರವರೆಗಿನ ತರಗತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಏಕೀಕರಿಸಿ ಪ್ರತ್ಯೇಕವಾದ ಸೆಕೆಂಡರಿ ಶಿಕ್ಷಣ ಮಂಡಳಿಯನ್ನು ರಚಿಸಲು ಮುಂದಾಗುತ್ತಿದೆ. ಈ ಮಂಡಳಿಯ ರಚನೆಯಿಂದ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಲವಾರು ಸೌಲಭ್ಯಗಳು ನಷ್ಟವಾಗಲಿದೆ. ಕನ್ನಡ ಮಾಧ್ಯಮ ಅಧ್ಯಾಪಕರ ಪದೋನ್ನತಿ ಅವಕಾಶಗಳು ನಷ್ಟವಾಗಲಿದೆ. ಶಾಲೆಗಳ ಆಡಳಿತ ಮುಖ್ಯೋಪಾಧ್ಯಾಯರಿಂದ ಪ್ರಾಂಶುಪಾಲರಿಗೆ ಲಭಿಸುವುದರಿಂದ ಇನ್ನು ಮುಂದೆ ಕನ್ನಡ ಮಾಧ್ಯಮ ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ ಕನ್ನಡ ಗೊತ್ತಿರುವ ಮುಖ್ಯೋಪಾಧ್ಯಾಯರು ಇರಬೇಕೆಂಬ ಕಾನೂನು ಇಲ್ಲದಾಗುತ್ತದೆ. ಇದು ಕನ್ನಡಿಗರ ಸಂವಿಧಾನ ಬದ್ಧ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು. ಡಾ.ಎಂ.ಎ ಖಾದರ್ ಆಯೋಗದ ವರದಿಯಲ್ಲಿ ಕಾಸರಗೋಡಿನಲ್ಲಿ ೨೦೧೪-೧೫ ರಲ್ಲಿ ೧೮೫ ಶಾಲೆಗಳಲ್ಲಾಗಿ ೨೮೮೦೪ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕಲಿಯುತ್ತಾರೆ ಎಂಬುದಾಗಿ ದಾಖಲಿಸಲಾಗಿದೆ. ಅಷ್ಟು ವಿದ್ಯಾರ್ಥಿಗಳಿಗೆ ೧೩೮೮ ಕನ್ನಡ ಮಾಧ್ಯಮ ಅಧ್ಯಾಪಕರು ಇದ್ದಾರೆ. ಆದರೆ ಇಷ್ಟು ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಈ ಆಯೋಗದ ವರದಿ ವಿಫಲವಾಗಿದೆ. ಈ ವರದಿಯು ಸರಕಾರದ ಶಿಕ್ಷಣ ನೀತಿಯಾಗಿ ಬದಲಾದರೆ ಅದು ಗಡಿನಾಡ ಕನ್ನಡಿಗರಲ್ಲಿ ಉಂಟುಮಾಡಬಹುದಾದ ಪರಿಣಾಮದ ವ್ಯಾಪ್ತಿಯನ್ನು ಊಹಿಸಲು ಸಾಧ್ಯವಿಲ್ಲ.

.....ಕಾಸರಗೋಡಿನ ಕನ್ನಡಿಗರ ಅಸ್ಥಿತ್ವಕ್ಕೆ ಆಧಾರ ಇಲ್ಲಿನ ಕನ್ನಡ ಶಾಲೆಗಳು ಮಾತ್ರವಾಗಿದೆ.....
....ಕನ್ನಡ ಶಾಲೆಗಳು ಇಲ್ಲವಾದರೆ ಪರಿಣಾಮವೇನು...?

ಡಾ.ಖಾದರ್ ವರದಿಯಿಂದ... ಕಾಸರಗೋಡಿನ ಕನ್ನಡ ಶಾಲೆಗಳು
೨೦೧೪-೧೫
ಡಾ।। ಎಂ . ಎ  ಖಾದರ್ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು