ಈ ಅಂತರ್ಜಾಲ ತಾಣವು ಕಾಸರಗೋಡಿನ ಕನ್ನಡಿಗರ ಕ್ಷೇಮ ಮತ್ತು ಅಭಿವೃದ್ಧಿಯು ಧ್ಯೇಯವಾಗಿರುವ ಒಂದು ಸ್ವತಂತ್ರ ವೇದಿಕೆಯಾಗಿದೆ. ಕಾಸರಗೋಡಿನ ಜನರ ಸಮಸ್ಯೆಗಳನ್ನು ವರದಿಮಾಡುವ ದೃಷ್ಟಿಯಿಂದ 2017 ರಲ್ಲಿ ರಚಿತವಾದ ಈ ಬ್ಲೋಗ್ ಇದೀಗ ಕನ್ನಡಿಗರು ವಂಚಿತರಾಗುತ್ತಿರುವ ಶಿಕ್ಷಣ, ಉದ್ಯೋಗ ಮತ್ತು ಮಾಹಿತಿ ಪ್ರಸರಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಬಯಸುತ್ತಿದೆ. ಆ ಮೂಲಕ ಕಾಸರಗೋಡಿನ ಕನ್ನಡಿಗರಿಗೆ ಉತ್ತಮವಾದ ಮತ್ತು ದೃಢವಾದ ಸಾಮಾಜಿಕ ಅಡಿಪಾಯ ಕಲ್ಪಿಸಲು ಇಚ್ಛಿಸುತ್ತಿದೆ. ಇದೊಂದು ಕಿರು ಪ್ರಯತ್ನ ಮಾತ್ರ.
ಕುವೆಂಪುರವ ಈ ಕವನ ಕೇಳಿದರೆ ಕನ್ನಡ ಪ್ರಜ್ಞೆ ಹುಟ್ಟದೇ..?
ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!
ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತದು ಪೋಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೆ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.
ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲಬೇಡಿ;
ಹೂಮಾಲೆ ಸೂಡಿವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.
ಪರಕೀಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು;
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು;
ನಮ್ಮ ನಾಲಗೆ ನಮಗೆ ಕೀಳುತೊದಲು!
ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!
ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?
ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ,
ಗರ್ಜಿಸುವುದನು ಕಲಿತು ಸಿಂಹವಾಗಿ!
ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು
ಶಿರವೆತ್ತಿ ನಿಂತು ಕುರಿತನವ ನೀಗಿ.
೩-೧೦-೧೯೩೫
ಕಯ್ಯಾರರ ಈ ಕರೆ ಕನ್ನಡಿಗನ ಕಿವಿ ಮುಟ್ಟದೇ..?
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
ಕಾಯಲಾರೆನೆ ಸಾಯೆ ಓ ಬನ್ನಿ - ಬೆಂಕಿ ಬಿದ್ದಿದೆ ಮನೆಗೆ!
ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ
ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ
ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ
ಬೆಂಕಿಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ
ಬೆಂಕಿಯನ್ನಾರಿಸಲು ಬೇಗ ಬನ್ನಿ
ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ
ನಾಡ ನುಳಿಸುವೆನಂದರೆ ಓಡಿ ಬನ್ನಿ
ಬೆಂಕಿ ಬಿದ್ದಿದೆ ಮನೆಗೆ!
ಕುವೆಂಪುರವರು ಹೇಳಿದಂತೆ ಕನ್ನಡಕ್ಕಾಗಿ ಕೈ ಎತ್ತಿದರೆ ಆ ಕೈ ಕಲ್ಪವೃಕ್ಷ ಆದಿತು. ಹೊರತಾಗಿ ಅದು ದುರುಪಯೋಗಿ ಆಗುವುದಿಲ್ಲ.
ಅಂದರೆ ಕನ್ನಡಿಗನ ಮಂತ್ರ ಹಾಗು ತಂತ್ರ ಎಂದೆಂದಿಗೂ ಶಾಂತಿ ಮಾತ್ರ. ಅದು ಕ್ರಾಂತಿ ಅಲ್ಲ, ಆಗಲೂ ಬಾರದು.
ಸಿರಿಗನ್ನಡಂ ಗೆಲ್ಗೆ... ಗಡಿನಾಡು ಬಾಳ್ಗೆ...
ಭಾರತ್ ಮಾತಾ ಕೀ ಜೈ......
28 - 05 - 2020
ಚದುರಿಹೋದ ಕನ್ನಡದ ಮನಸುಗಳು ಒಗ್ಗಟ್ಟಾದರೆ ಮಾತ್ರ ಕನ್ನಡ ಕಾಸರಗೋಡಿನ ಮಣ್ಣಿನಲ್ಲಿ ಉಳಿಯಲು ಸಾಧ್ಯ,....ರಾಜಕೀಯ ಮಿಶ್ರಿತ ಧೋರಣೆಗಳು ನಮ್ಮನವನ್ನು ಕುಂದಿಸಿದೆ, ಒಡೆದು ಆಳುವ ನೀತಿ ಇಲ್ಲಿ ಈಗಾಗಲೇ ಜಾರಿಯಾದದ್ದು ಕನ್ನಡದ ಮನಸುಗಳು ಅರಿಯುವುದೇ ಇಲ್ಲ. ಕೇವಲ ಚುಣಾವಣಾ ಸಂಧರ್ಭಗಳಿಗಷ್ಟೇ ಅತಂತ್ರ ಕನ್ನಡಿಗರ ಕೂಗು ತಾರಕಕ್ಕೇರುವುದಲ್ಲದೆ, ಬೇರೇನಿದೆ?.ಒಬ್ಬ MLA ಕನ್ನಡದಲ್ಲಿ ಮಾತನಾಡಿದೆ ಅಥವಾ ಪ್ರತಿಜ್ಞೆ ಮಾಡಿದರೆ,ನಮಗಾನಂದವಾದರೂ ಹದಗೆಟ್ಟ ಸ್ಥಿತಿ ಸರಿಯಾಗುವುದೇ...?! ಗಡಿಪ್ರದೇಶದ ಕನ್ನಡಿಗರು ತ್ರಿಶಂಕು ಸ್ವರ್ಗದಲ್ಲಿ ನರಳಾಡುವುದನ್ನು ತಪ್ಪಿಸಲು ಬೇಕಾಗಿರುವುದು ನಮ್ಮ ಒಗ್ಗಟ್ಟೇ ಹೊರತು ಬೇರೇನಲ್ಲ......
ಪ್ರತ್ಯುತ್ತರಅಳಿಸಿ