DARK MODE 

ಶುಕ್ರವಾರ, ಆಗಸ್ಟ್ 09, 2019

ಕಾಶ್ಮೀರಕ್ಕೂ ಬಂತು ಸ್ವಾತಂತ್ರ್ಯ.....

ಇಂದು ಕನ್ನಡ ಪತ್ರಿಕೆಯೊಂದನ್ನು ಓದುತ್ತಿರುವಾಗ ಅದರಲ್ಲಿ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬ ಸುದ್ದಿ ತಿಳಿಯಿತು. ಅದರಲ್ಲಿ ಕರ್ನಾಟಕದ ಪ್ರಾದೇಶಿಕ ನಿವಾಸಿಯಾಗಿರುವ ಮತ್ತು ಹತ್ತನೇ ತರಗತಿಯನ್ನು ಭಾರತದ ಯಾವುದೇ ಅಂಗೀಕೃತ ಶಿಕ್ಷಣ ಪ್ರಾಧಿಕಾರದಿಂದ ಕನ್ನಡ ಭಾಷೆಯೊಂದಿಗೆ ಅಭ್ಯಾಸ ಮಾಡಿ ಉತ್ತೀರ್ಣರಾಗಿರಬೇಕೆಂದು ಇತ್ತು.‌ ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ಅರ್ಜಿ ನೀಡಲು ವೆಬ್ ವಿಳಾಸ http://appost.in/gdsonline ಎಂಬ ಅಧಿಕೃತ ಅಂತರ್ಜಾಲ ತಾಣ ವಿಳಾಸ ಇತ್ತು. ನಾನು ಆ ತಾಣಕ್ಕೆ ಭೇಟಿ ನೀಡಿದಾಗ ಅರ್ಜಿ ಸಲ್ಲಿಸುವವರು ಆ ರಾಜ್ಯದ ಅಥವಾ ಆ ಪ್ರದೇಶದ ನಿವಾಸಿ ಆಗಿರಬೇಕು ಎಂದಿತ್ತು.
ನಾನು ಕೇರಳ ನಿವಾಸಿಯಾದ ಕನ್ನಡಿಗ ಆದ್ದರಿಂದ ನನಗೆ ಕರ್ನಾಟಕದ (ಮಂಗಳೂರು ಪ್ರದೇಶದ) ಅಂಚೆ ಕಛೇರಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಅನರ್ಹ ಎಂಬುದು ಗೊತ್ತಾಯಿತು‌.
ಮತ್ತೆ ಆ ವೆಬ್ ಪೇಜ್ ಪರಿಶೀಲಿಸಿದಾಗ ನನ್ನ ರಾಜ್ಯ ಕೇರಳದಲ್ಲೂ ಅಂಚೆ ಇಲಾಖೆಯಲ್ಲಿ ಸಮಾನ ಹುದ್ದೆಗಳು ಖಾಲಿ ಇದೆ ಎಂಬುದು ತಿಳಿಯಿತು. ನಾನು ಕೇರಳದ ಪ್ರಾದೇಶಿಕ ಮತ್ತು ಖಾಯಂ ನಿವಾಸಿಯಾದ್ದರಿಂದ ಆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹನೆಂದು ಮುಂದುವರಿದಾಗ ಕೇರಳದ ಪ್ರಾದೇಶಿಕ ಭಾಷೆಯನ್ನು ಹತ್ತನೇ ತರಗತಿಯಲ್ಲಿ ಒಂದು ವಿಷಯವಾಗಿ ವ್ಯಾಸಾಂಗ ಮಾಡಿರಬೇಕೆಂದು ಇತ್ತು. ಕನ್ನಡ ಕೇರಳದ ಅಧಿಕೃತ ಭಾಷೆ ಅಲ್ಲದಿದ್ದರೂ ಕಾಸರಗೋಡಿನ ಅಲ್ಪಸಂಖ್ಯಾತರೆನಿಸಿದ ಬಹುಸಂಖ್ಯಾತ ಕನ್ನಡಿಗರ ಪ್ರಾದೇಶಿಕ ಭಾಷೆ ಎಂಬ ಧೈರ್ಯದಲ್ಲಿ ನಾನು ಆ ಕೆಲಸಕ್ಕೆ ಸಂಬಂಧಿಸಿದ ಅಂಚೆ ಇಲಾಖೆಯ ಸುತ್ತೋಲೆಯನ್ನು ಓದಿದಾಗ ಕೇರಳದ ಏಕೈಕ ಪ್ರಾದೇಶಿಕ ಭಾಷೆ ಮಲೆಯಾಳಂ ಎಂದಿತ್ತು.
ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಅಧಿಕೃತ ಭಾಷೆ ಅಲ್ಲ,‌ ಪ್ರಾದೇಶಿಕ ಭಾಷೆ ಎಂಬ ಹಕ್ಕು ಕೂಡ ಕಾಸರಗೋಡಿನ ಕನ್ನಡಕ್ಕೆ ಇಲ್ಲ. ನಮ್ಮ ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವವನ್ನು ಗುರುತಿಸುವಲ್ಲಿ ಕೇಂದ್ರ‌ ಮತ್ತು ಪ್ರಾಂತ್ಯ ಸರಕಾರಗಳು ಸಮಾನವಾಗಿ ವಿಫಲವಾಗಿದೆ. ವಿಫಲವಾಗಿದೆ ಎನ್ನುವುದಕ್ಕಿಂತ ಸಫಲವಾಗಲು ಪ್ರಯತ್ನಿಸಲಿಲ್ಲ ಎನ್ನುವ ಮಾತೇ ಸರಿ.
ಜಗತ್ತಿನ ಅತ್ಯಂತ ಹೆಚ್ಚು ಜನರು ಮಾತನಾಡುವ ಭಾಷೆ ಎಂಬ ನೆಲೆಯಲ್ಲಿ ಕನ್ನಡಕ್ಕೆ ಇಪ್ಪತ್ತೊಂಭತ್ತನೆಯ ಸ್ಥಾನವಿದೆ. ದೇಶದ ಅತ್ಯಂತ ಪುರಾತನ ಮತ್ತು ಸುಸಂಸ್ಕೃತ, ಸಮೃದ್ಧ ಭಾಷೆಯಾದ ಕನ್ನಡ ಈ ಜಗತ್ತಿನಾದ್ಯಂತ ಸುಮಾರು ೬.೪ ಕೋಟಿ ಜನರು ಮಾತನಾಡುವ ಭಾಷೆ ಆಗಿದೆ. ಆ ಭಾಷಾ ಸಮೂಹದಲ್ಲಿ ಹುಟ್ಟಿಬೆಳೆದು ಬುದ್ದಿವಂತ ನೇತಾರರ, ಅಧಿಕಾರಿಗಳ ಅನ್ಯಾಯದ ಗಡಿರೇಖೆಯಲ್ಲಿ ಹೊಸ ಪ್ರಾಂತ್ಯದ ಕಸವಾಗಿದ್ದೇವೆ.
ನಮ್ಮ ಮಾತೃಭಾಷೆ ಕನ್ನಡ, ನಾವು ಆ ಭಾಷೆಯಲ್ಲಿ ಮಾತ್ರ ವ್ಯವಹಾರಿಸುತ್ತೇವೆ ಎಂದು ಹೇಳುವ ಧೈರ್ಯ ನಾವು ಎಂದೋ ಕಳೆದು ಕೊಂಡಿದ್ದೇವೆ.
ಶಾಂತಿ, ಸಮಾಧಾನ ನಮ್ಮ ಹೇಡಿತನದ, ಗುಲಾಮತನದ ಲಕ್ಷಣಗಳೇ ಹೊರತು ನೊಬೆಲ್ ಪ್ರಶಸ್ತಿ ಗಳಿಸುವ ಮಂತ್ರ-ತಂತ್ರಗಳೇನು ಅಲ್ಲ.
ಎಲ್ಲಾ ಗಡಿನಾಡ ಕನ್ನಡಿಗರಿಗೂ ಕನ್ನಡ ಬೇಕು.... ಆದರೆ ಮಲೆಯಾಳಿ ಸ್ನೇಹಿತರ ಸ್ನೇಹ ಕಳೆದುಕೊಳ್ಳಲು ಇಷ್ಟವಿಲ್ಲ..... ಮಲೆಯಾಳಿ ಅಧಿಕಾರಿಗಳ ದ್ವೇಷ ಸಂಪಾದಿಸಲು ಇಷ್ಟವಿಲ್ಲ..... ರಾಜ್ಯ ಸರಕಾರದ ತಪ್ಪುಗಳನ್ನು ಹೇಳಿದಾಗ ಅಲ್ಲಿ ಕನ್ನಡಿಗರು ಪಕ್ಷದ ಹೆಸರಲ್ಲಿ ಎರಡು ಪಾಲಾಗುತ್ತಾರೆ..... ಕೇಂದ್ರ ಸರಕಾರದ ತಪ್ಪುಗಳನ್ನು ಹೇಳಿದಾಗ ಮತ್ತೆರಡು ಪಾಲು..... ಸ್ಥಳೀಯ ಆಡಳಿತ ಸಂಸ್ಥಗಳನ್ನು ದೂರಿದಾಗ ಮತ್ತೂ ಹಲವು ಪಾಲು.... ಕೊನೆಗೆ ಉಳಿಯುವುದು ಅಸಹಾಯಕ ಕನ್ನಡಿಗನೊಬ್ಬನೆ.....
ಸುಳ್ಳಿಗೆ ಹಲವು ಮುಖಗಳಿದೆ. ಆದರೆ ಸತ್ಯಕ್ಕೆ ಒಂದೇ ಮುಖ. ಆ ಮುಖವನ್ನು ಎಲ್ಲರೂ ಒಪ್ಪಲಾರರು.
ನಾವು ಭಾಷಾ ವಿರೋಧಿಗಳಲ್ಲ ಎಂಬುದು ನಾವು ಗಡಿನಾಡ ಕನ್ನಡಿಗರ ಧ್ಯೇಯವಾಗಿದೆ. ಅಕ್ಷರಶಃ ನಿಜ, ನಾವು ಭಾಷಾ ವಿರೋಧಿಗಳಾಗಿದ್ದರೆ ನಮ್ಮ ಸಮಸ್ಯೆ ಯಾವತ್ತೇ ಬಗೆಹರಿಯುತ್ತಿತ್ತು.
ಸಾಮ,ದಾನ,ಭೇದ,ದಂಡ ಎಂಬ ತತ್ವದಲ್ಲಿ ಮೊದಲ ಮೂರಲ್ಲೇ ನಾವು ಸುತ್ತಾಡುತ್ತಿದ್ದೇವೆ. ಇಷ್ಟೂ ತಾಳ್ಮೆ ಎಲ್ಲಿ ನೋಡಿದರೂ ಸಿಗದು...ಖಂಡಿತಾ.
ಕಾಲ ಬದಲಾಗಿದೆ... ಕಾಶ್ಮೀರವೂ ಭಾರತ ಸಂಪೂರ್ಣ ಭಾಗವಾಗಿದೆ. ದೇಶದ ಇತರ ಎಲ್ಲಾ ಪ್ರದೇಶಗಳಂತೆ ಕಾಶ್ಮೀರವೂ ಒಂದಾಗಿದೆ. ಕಾಶ್ಮೀರದ ನಿವಾಸಿಗಳೂ ಮುಂದೆ ದೇಶದ ಇತರ ಎಲ್ಲಾ ಜನರು ಅನುಭವಿಸುವ ಹಕ್ಕುಗಳನ್ನು, ಅವಕಾಶಗಳನ್ನು ಪಡೆಯಲಿದ್ದಾರೆ. ಆದರೆ ನಾವು ಕಾಸರಗೋಡಿನ ಗಡಿನಾಡ ಕನ್ನಡಿಗರಾದರೂ ನಮ್ಮ ದೇಶದಿಂದ ಅದೆಷ್ಟೋ ದೂರದಲ್ಲಿ ಇದ್ದೇವೆ ಎಂಬ ಅನಿಸಿಕೆ ವ್ಯಕ್ತವಾಗುತ್ತಿದೆ. ನಮ್ಮ ಹಲವು ಸಾಂವಿಧಾನಿಕ ಹಕ್ಕುಗಳು ನಷ್ಟವಾಗಿದೆ. ನಾವೇ ತಿಳಿಯದಂತೆ ನಾವು ದ್ವಿತೀಯ ದರ್ಜೆಯ ಪ್ರಜೆಗಳಾಗುತ್ತಿದ್ದೇವೆ....ಸತ್ಯ...
ಆಳುವವರ ಬಲಿಪಶುಗಳಾಗುವುದಕ್ಕಿಂತ ನಮ್ಮ ಸಂಸ್ಕೃತಿಯನ್ನು, ಭಾಷೆಯನ್ನು ನಾವೇ ತ್ಯಜಿಸುವುದೇ ಲೇಸು. ಚರಿತ್ರೆಗಳಲ್ಲಿ ನಮ್ಮ ಭಾಷೆಯ ಮರ್ಯಾದೆಯಾದರೂ ಉಳಿಯುತ್ತದೆ. ಇಲ್ಲದಿದ್ದರೆ ಹೋರಾಡೋಣ...
ಕನ್ನಡ ಭಾಷೆಯ ಉಳಿವಿಗಾಗಿ ಅಲ್ಲ.... ಕನ್ನಡಮ್ಮನ ರಕ್ಷಣೆಗಾಗಿ
ಇತಿ,
ಎ.ಕೆ.ಜೆ
ಗಡಿನಾಡ ಕನ್ನಡಿಗ
https://kannadakasaragod.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು